ಕರ್ತವ್ಯ ನಿರ್ಲಕ್ಷತೆ ಆರೋಪ: ಇಬ್ಬರು ಅಮಾನತ್ತು ತುಮಕೂರು(ಕ.ವಾ.)ಜು.೧೪: ಶಿರಾ ತಾಲ್ಲೂಕಿನ ತರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಹಾಗೂ ಸಹ ಶಿಕ್ಷಕಿ ರೇಣುಕಮ್ಮ ಬಿ.ಆರ್. ಅವರನ್ನು ಕರ್ತವ್ಯ ನಿರ್ಲಕ್ಷತೆಯ ಆರೋಪದ ಮೇಲೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ(ಆಡಳಿತ) ಎಂ.ಆರ್.ಮAಜುನಾಥ ಅವರು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಶಾಲೆಯಲ್ಲಿ ಮಧ್ಯಾಹ್ನ ಅವಧಿಯ ಬಿಸಿಯೂಟ ಬಡಿಸುವ ಸಂದರ್ಭದಲ್ಲಿ ೨ನೇ ತರಗತಿಯ ರಿತ್ವಿಕಾ ಎಂಬ ಮಗು ಬಿಸಿಯೂಟಕ್ಕೆ ಸಿದ್ಧಪಡಿಸಿದ ಸಾಂಬಾರಿಗೆ ಆಯತಪ್ಪಿ ಬಿದ್ದು ಸುಟ್ಟ ಗಾಯಗಳಾಗಿರುವ ಬಗ್ಗೆ ಶಿರಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ವರದಿ ನೀಡಿರುವ ಹಿನ್ನಲೆಯಲ್ಲಿ ಹಾಗೂ ಮಕ್ಕಳ ರಕ್ಷಣಾ ಆಯೋಗದ ಸದಸ್ಯರು ಶಿರಾ ತಾಲ್ಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಶಿಸ್ತು ಕ್ರಮ ಜರುಗಿಸಲು ಶಿಫಾರಸ್ಸು ಮಾಡಿರುವ ಹಿನ್ನಲೆಯಲ್ಲಿ ಈ ರೀತಿಯ ಕರ್ತವ್ಯ ನಿರ್ಲಕ್ಷತೆ, ಬೇಜವಾಬ್ದಾರಿತನ, ಮಕ್ಕಳ ಸುರ್ಷತೆ ಕಾಪಾಡುವಲ್ಲಿ ವಿಫಲರಾಗಿ ಕರ್ತವ್ಯಲೋಪವೆಸಗಿರುವುದರಿಂದ ಅಮಾನತ್ತು ಮಾಡಿ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಶಿರಾ ತಾಲ್ಲೂಕಿನ ತರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಹಾಗೂ ಸಹ ಶಿಕ್ಷಕಿ ರೇಣುಕಮ್ಮ ಬಿ.ಆರ್. ಅವರನ್ನು ಮೇಲಿನ ಆರೋಪಗಳ ಬಗ್ಗೆ ವಿಚಾರಣೆ ಹಾಗೂ ಸೂಕ್ತ ಶಿಸ್ತುಕ್ರಮ ಕಾಯ್ದಿರಿಸಿ, ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ನೌಕರರಿಗೆ ಕೆಸಿಎಸ್ಆರ್ ನಿಯಮ ೯೮(ಎ)ರನ್ವಯ ಜೀವನಾಧಾರ ಭತ್ಯೆ ಪಾವತಿಸಲಾಗುವುದು. ನೌಕರರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಅವರು ಸೂಚಿಸಿದ್ದಾರೆ.