AIDSO 8 ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನದ ಬೃಹತ್ ಮೆರವಣಿಗೆಗೆ ಸಾಕ್ಷಿಯಾದ ಸಾವಿರಾರು ವಿದ್ಯಾರ್ಥಿಗಳು
ಶಿಕ್ಷಣವನ್ನು ಖಾಸಗೀಕರಣಗೊಳಿಸುವ NEP ವಿರುದ್ಧದ ಹೋರಾಟ ಮುಂದುವರೆಯಲಿ’- ಕೆ. ದೊರೈರಾಜು
ತುಮಕೂರು: “ಪ್ರಜಾಪ್ರಭುತ್ವದ ಆಶಯಗಳಿಗೆ ವಿರೋಧ ವಾಗಿರುವ, ಅವಕಾಶ ವಂಚಿತರ ಸಮುದಾಯಗಳನ್ನು, ಬಡಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಯುವಂತೆ ಮಾಡುತ್ತಿರುವ ಎನ್.ಇ.ಪಿ ವಿರುದ್ಧ ವಿದ್ಯಾರ್ಥಿಗಳ ಹೋರಾಟ ಮುಂದುವರೆಯಲಿ” ಎಂದು ಪ್ರಗತಿಪರ ಚಿಂತಕರಾದ ದೊರೈರಾಜು ಅವರು AIDSO ನ 8ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನದ ಬಹಿರಂಗ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರಿದು ಅವರು “ಇಂದು ಸರ್ಕಾರಗಳು ಕಾರ್ಪೊರೇಟ್ ಬಂಡವಾಳಶಾಹಿಗಳ ಕೈಗೊಂಬೆಗಳಂತೆ ನೀತಿಗಳನ್ನು ಜಾರಿಗೆ ತರುತ್ತಿವೆ. ಹೋರಾಟಗಳಿಲ್ಲದೆ ಇದನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ. ವಿದ್ಯಾರ್ಥಿ ಯುವಜನರೇ ಈ ಹೋರಾಟಗಳ ಜೀವಾಳ ಎಂಬುದನ್ನು ಇತಿಹಾಸವೇ ಸಾಬೀತು ಮಾಡಿದೆ” ಎಂದು ಅಭಿಪ್ರಾಯಪಟ್ಟರು..
AIDSOನ ಅಖಿಲ ಭಾರತ ಅಧ್ಯಕ್ಷರಾದ ವಿ.ಎನ್ ರಾಜಶೇಖರ್ ಅವರು ಮಾತನಾಡಿ, ಸಾರ್ವಜನಿಕ ಶಿಕ್ಷಣ ಉಳಿಸಿ ಎಂಬ ಘೋಷಣೆಯೊಂದಿಗೆ ಇಡೀ ರಾಜ್ಯದಾದ್ಯಂತ ನಡೆದ ಬೃಹತ್ ಚಳುವಳಿಯ ಪ್ರತಿಫಲವಾಗಿ ಪ್ರಸ್ತುತ ರಾಜ್ಯ ಸರ್ಕಾರವು ಎನ್.ಇ.ಪಿ.ಯನ್ನು ರದ್ದುಗೊಳಿಸಿದೆ. ಆದರೆ ಇದೇ ಸರ್ಕಾರ ಎನ್.ಇ.ಪಿಯ ಭಾಗವಾಗಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಮೂಲಕ ಖಾಸಗಿಯವರಿಗೆ ದತ್ತು ನೀಡಬೇಕೆಂದು ಪ್ರಸ್ತಾಪಿಸಿರುವುದು ಆತಂಕಕಾರಿಯಾಗಿದೆ. ಇದರ ವಿರುದ್ದ ಮತ್ತೆ ವಿದ್ಯಾರ್ಥಿಗಳು ಒಗ್ಗಟ್ಟಾಗಿ ಬೃಹತ್ ಚಳುವಳಿಯನ್ನು ಕಟ್ಟುವ ತುರ್ತು ಅವಶ್ಯಕತೆ ಎದುರಾಗುತ್ತಿದೆ. ವಿದ್ಯಾರ್ಥಿಗಳು ಇದಕ್ಕೆ ಸಜ್ಜಾಗಬೇಕಿದೆ ಎಂದು ಕರೆ ನೀಡಿದರು.
ನಂತರ ಎಐಡಿಎಸ್ಓ ನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು ಮಾತನಾಡಿ ” ಈ ದೇಶದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿಯವರು ದೇಶದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಿಷ್ಟವಾಗಿರಬೇಕೆಂದು ಆಶಿಸಿದ್ದರು. ಅವರ ಈ ಕನಸನ್ನು ನನಸಾಗಿಸುವ ಸಂಕಲ್ಪವನ್ನು ತೆಗೆದುಕೊಳ್ಳುವುದೇ 75ನೇ ಸ್ವಾತಂತ್ರ್ಯ ವರ್ಷಾಚರಣೆಯ ಸಮಾರೋಪದ ನೈಜ ಆಶಯವಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿಎಸ್ಓ ನ ರಾಜ್ಯ ಅಧ್ಯಕ್ಷರಾದ ಅಶ್ವಿನಿ ಕೆ.ಎಸ್ ಅವರು ವಹಿಸಿದ್ದರು. ಎಐಡಿಎಸ್ಓ ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸೌರವ್ ಘೋಷ್, ಎಐಡಿಎಸ್ ಓ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಹಣಮಂತು, ಖಜಾಂಚಿಗಳಾದ ಅಭಯಾ ದಿವಾಕರ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.