ಜಾನಪದ ಗಾಯಕ ಗೋ.ನಾ.ಸ್ವಾಮಿಗೆ ಕಾಸರಗೋಡಿನ
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಗೌರವ
ತುಮಕೂರು: ಜಾನಪದ ಗಾಯಕ, ಸಾಹಿತಿ, ಕನ್ನಡ ಸಂಘಟಕ ಗೋ.ನಾ.ಸ್ವಾಮಿಯವರ ಕನ್ನಡ ನಾಡು, ನುಡಿಗಾಗಿ ಸಲ್ಲಿಸಿದ ಸೇವೆಗಾಗಿ ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥೆಯು ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಯ್ಕೆ ಮಾಡಿದೆ.
ಜಿಲ್ಲೆಯ ಶಿರಾ ತಾಲ್ಲೂಕಿನವರಾದ ಗೋ.ನಾ.ಸ್ವಾಮಿಯವರು ಕನ್ನಡ ಜಾನಪದ ಗಾಯಕರಾಗಿ ನಾಡಿನಾದ್ಯಂತ ಮಾತ್ರವಲ್ಲದೆ ಹೊರ ರಾಜ್ಯ, ೬೦ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಕ್ರಮ ನೀಡಿ ಕನ್ನಡ ಜಾನಪದ ಗಾಯನದ ಕಂಪು ಹರಡಿದ್ದಾರೆ. ಸಾಹಿತಿಯಾಗಿ, ಕನ್ನಡ ನಾಡುನುಡಿಯ ಪ್ರಚಾರ ಕಾರ್ಯಗಳಲ್ಲಿ ಸಕ್ರಿಯರಾಗಿರುವ ಇವರ ನಾಡು, ನುಡಿ ಸೇವೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಗೋ.ನಾ.ಸ್ವಾಮಿ ಭಾಜನರಾಗಿದ್ದಾರೆ. ಈ ತಿಂಗಳ ೧೯ರಂದು ಕಾಸರಗೋಡಿನನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇವರು ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಂಯೋಜಕರಾಗಿ ನಾಡಿನಾದ್ಯಂತ ನುಡಿಹಬ್ಬ ಕಾರ್ಯಕ್ರಮ ಆಯೋಜಿಸಿದ್ದಾರೆ. ರಸ್ತೆ ಸುರಕ್ಷತೆ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕಳಕಳಿಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಕಿರುತೆರೆ ಕಾರ್ಯಕ್ರಮ ನಿರೂಪಕರಾಗಿ ಹಲವು ಟಿ.ವಿ.ಶೋಗಳನ್ನು ನಡೆಸಿ ಜನಪ್ರಿಯರಾಗಿದ್ದಾರೆ. ಇವರ ಜಾನಪದ ಗಾಯನದ ಮಧುರ ಅಲೆಗಳು, ಮುತ್ತಿನುಂಗುರ, ಸಪ್ತಸ್ವರ, ಲಗ್ನಪತ್ರಿಕೆ, ಬೆಳ್ಳಿ ಪಲ್ಲಕ್ಕಿ, ಸೇರಿದಂತೆ ಹತ್ತಾರು ಧ್ವನಿಸುರಳಿ ಬಿಡುಗಡೆಯಾಗಿ ಜಾನಪದ ಗಾಯನ ಕ್ಷೇತ್ರದಲ್ಲಿ ಜನಮನ ತಲುಪಿವೆ.
ರಾಜ್ಯದಲ್ಲಿ ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆ ಹಾಗೂ ಜಾನಪದ ಕಲಾವಿದರ ಉಳಿವು, ಬೆಳವಿಗಾಗಿ ಗೋ.ನಾ.ಸ್ವಾಮಿಯವರು ಜನಮನ ಎಂಬ ಸಂಸ್ಥೆ ಸ್ಥಾಪಿಸಿ ಜಾನಪದ ಕಲಾವಿದರನ್ನು ಒಗ್ಗೂಡಿಸಿ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಗೋ.ನಾ.ಸ್ವಾಮಿಯವರಿಗೆ ಕೇರಳದ ಕಾಆಸರಗೋಡು ಸಂಸ್ಥೆ ನೀಡುತ್ತಿರುವ ಪ್ರಶಸ್ತಿಯು ಜಿಲ್ಲೆಯ ಜಾನಪದ ಕಲಾವಿದನಿಗೆ ಸಲ್ಲುವ ಗೌರವವಾಗಿದೆ.
ಕನ್ನಡ ನಾಡುನುಡಿಯ ಪ್ರಚಾರ ಕಾರ್ಯಗಳಲ್ಲಿ ಸಕ್ರಿಯ
Leave a comment
Leave a comment