ತುಮಕೂರು ನಗರದ ಶ್ರೀರಾಮನಗರ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಇಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಈ ಶಾಲೆಯಲ್ಲಿ ಹಾಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು ಈ ಕಾಲದಲ್ಲಿಯೂ ನೆಲದ ಮೇಲೆಯೇ ಕುಳಿತು ಪಾಠವನ್ನು ಆಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಹಲವಾರು ಮಕ್ಕಳಿಗೆ ಬ್ಲಾಕ್ ಬೋರ್ಡ್ ಸರಿಯಾಗಿ ಕಾಣಿಸದೇ ತುಂಬಾ ನೋವನ್ನು ಅನುಭವಿಸುತ್ತಿರುವುದನ್ನು ಮನಗಂಡ ಸ್ಥಳೀಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಷೀರ್ ಅಹಮ್ಮದ್ ರವರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಡು ಬಡವರಾಗಿದ್ದು ಅವರು ಕೂತು ಪಾಠಕೇಳಲು 25 ಡೆಸ್ಕ್ಗಳನ್ನು ಜೊತೆಗೆ 5 ಗ್ರೀನ್ ಬೋರ್ಡ್ಗಳನ್ನು ಕೊಡಿಸುವಂತೆ ಅರ್ಜಿಯನ್ನು ಹಾಕಿರುತ್ತಾರೆ.
ಮುಂದುವರೆದು ಮಾತನಾಡಿದ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಷೀರ್ ಅಹ್ಮದ್ರವರು ತುಮಕೂರು ನಗರದ ಹೃದಯಭಾಗದಲ್ಲಿರುವ ಶ್ರೀರಾಮನಗರ ಸರ್ಕಾರಿ ಶಾಲೆಯಲ್ಲಿಯೇ ಇಷ್ಟು ಅವ್ಯವಸ್ಥೆಯ ಗೂಡಾಗಿದ್ದು, ಶಿಕ್ಷಣ ಇಲಾಖೆ ಸೇರಿದಂತೆ ಜಿಲ್ಲಾಡಳಿತವು ತ್ವರಿತವಾಗಿ ಈ ಶಾಲೆಗೆ ಅಗತ್ಯ ಡೆಸ್ಕ್ಗಳನ್ನು ಮತ್ತು ಗ್ರೀನ್ ಬೋರ್ಡ್ಗಳನ್ನು ಒದಗಿಸಿಕೊಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿರುತ್ತಾರೆ. ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಅತೀ ಶೀಘ್ರವಾಗಿ ಕ್ರಮ ವಹಿಸಲಾಗುವುದೆಂದು ಅಭಯ ನೀಡಿರುತ್ತಾರೆ, ಜೊತೆಗೆ ಸಂಬoಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕೆಂದು ಸೂಚಿಸಿರುತ್ತಾರೆ.
ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಷೀರ್ ಅಹಮ್ಮದ್, ಮುಖ್ಯಶಿಕ್ಷಕರಾದ ರಂಗನಾಥ್, ಸಹಶಿಕ್ಷಕಿ ಶೋಭ ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.