ತುಮಕೂರು : ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳುತ್ತಿರುವ ಕಾರ್ಯಕ್ರಮಕ್ಕೆ ಮಾಜಿ ವಿಧಾನಪರಿಷತ್ ಸದಸ್ಯರಾದ ಚೌಡಾರೆಡ್ಡಿ ತೂಪಲ್ಲಿ ರವರು ತುಮಕೂರು ನಗರಕ್ಕೆ ಆಗಮಿಸಿದ್ದರು.
ಪದವೀಧರರನ್ನು ಉದ್ದೇಶಿಸಿ ಮಾತನಾಡುತ್ತಾ ಆಗ್ನೇಯ ಪದವೀಧರರ ಕ್ಷೇತ್ರವು ೦೫ ಕ್ಷೇತ್ರಗಳನ್ನೊಳಗೊಂಡಿರುವ ಕ್ಷೇತ್ರವಾಗಿದ್ದು ಈ ಕ್ಷೇತ್ರದಲ್ಲಿ ಕಳೆದ ಸಾಲಿನ ಚುನಾವಣೆಯಲ್ಲಿ ಸುಮಾರು ಒಂದು ಲಕ್ಷದ ಮುವತ್ತು ಸಾವಿರ ಮತದಾರರು ಇದ್ದರು, ಆದರೆ ಈ ಭಾರಿಯ ಚುನಾವಣೆಯಲ್ಲಿ ಮತದರಾರರ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳು ಇವೆ ಎಂದರು. ಅಲ್ಲದೇ ಈ ಚುನಾವಣೆಯ ಸಂಬಂಧ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವುದರ ಸಲುವಾಗಿ ನಮ್ಮ ಪಕ್ಷದ ವರಿಷ್ಠರಾದ ಸನ್ಮಾನ್ಯ ಹೆಚ್.ಡಿ.ದೇವೇಗೌಡರವರು, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ಯುವ ಜನತಾದಳದ ರಾಜ್ಯಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಇವರುಗಳೊಟ್ಟಿಗೆ ಚರ್ಚಿಸಿದ್ದಂತಹ ಸಂದರ್ಭದಲ್ಲಿ ಕಳೆದ ಭಾರಿ ನೀವು ಅತ್ಯಂತ ಅಲ್ಪ ಮತಗಳಿಂದ ಸೋಲನ್ನು ಅನುಭವಿಸಿದ್ದೀರಿ, ಆದರೆ ಈ ಭಾರಿ ಎನ್.ಡಿ.ಎ. ಮೈತ್ರಿಕೂಟದ ವಿಶ್ವಾಸವನ್ನು ಪಡೆದು ನಿಮ್ಮನ್ನು ಈ ಭಾರಿ ಅಭ್ಯರ್ಥಿಯನ್ನಾಗಿ ಮಾಡಿ ತಮ್ಮ ಗೆಲುವಿಗೆ ಶ್ರಮ ವಹಿಸೋಣ ತಾವು ನಿರಂತರವಾಗಿ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸುವ ಕಾರ್ಯಕ್ರಮದಲ್ಲಿ ನಿರಂತರವಾಗಿ ತೊಡಗಿಕೊಂಡು ಕೆಲಸವನ್ನು ಮಾಡಿ ಎಂದು ಸೂಚಿಸಿರುವ ಹಿನ್ನಲೆಯಲ್ಲಿ ನಾನು ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ೦೫ ಕ್ಷೇತ್ರಗಳಲ್ಲೂ ನಿರಂತರವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ ಎಂದರು.
ಉಳಿದಂತೆ ನನಗೆ ಈ ಭಾಗಗಳಲ್ಲಿ ಅಪಾರ ಪ್ರಮಾಣದ ಜನರ ಬೆಂಬಲ, ಶಿಕ್ಷಕರ ಬಲ, ಪದವೀಧರರ ಬೆಂಬಲ ದೊರೆಯುತ್ತಿದೆ, ಅಂತೆಯೇ ಈ ೫ ಮತ ಕ್ಷೇತ್ರಗಳಲ್ಲಿನ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದು, ಅವರುಗಳ ಅಹ್ವಾಲನ್ನು ಸ್ವೀಕರಿಸುತ್ತಾ ಬರುತ್ತಿದ್ದೇನೆ ಎಂದು ತಿಳಿಸಿದರು. ಈ ಸಭೆಯಲ್ಲಿ ಪ್ರಮುಖ ಮುಖಂಡರುಗಳಾದ ಮಲ್ಲಿಕಾರ್ಜುನ್, ವೈ.ಎಸ್.ಚಂದ್ರಶೇಖರ್, ಧರಣೇಂದ್ರ ಕುಮಾರ್ (ರಾಜು), ವೆಂಕಟೇಶ್, ಅಶ್ವತ್ಥಪ್ಪ, ರೇಣುಕಯ್ಯ, ಗೋವಿಂದಣ್ಣ ಸೇರಿದಂತೆ ಅಪರಾ ಪ್ರಮಾಣ ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಪದವೀಧರರು ಸೇರಿದಂತೆ ಚೌಡಾರೆಡ್ಡಿಯವರ ತುಮಕೂರಿನ ಸ್ನೇಹಿತರ ಬಳಗ ಸೇರಿದ್ದರು.



