ತುಮಕೂರು:ತುಮಕೂರು ತಾಲೂಕು ಬೆಳ್ಳಾವಿ ಹೋಬಳಿ ಗೌಡನಹಳ್ಳಿ ಗ್ರಾಮದ ಸರ್ವೆ ನಂ 19/08ರಲ್ಲಿರುವ ತಮ್ಮ ಭೂಮಿಯನ್ನು ಕೆ.ಐ.ಎ.ಡಿ.ಬಿಗೆ ಭೂ ಸ್ವಾಧೀನದಿಂದ ಕೈಬಿಡಬೇಕೆಂದು ಗೌಡನಹಳ್ಳಿ ಗ್ರಾಮದ ಸಂತ್ರಸ್ಥ ಕುಟುಂಬದವರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.

ಬುಧವಾರ ಕೊರಟಗೆರೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಡಾ.ಜಿ.ಪರಮೇಶ್ವರ್ ಹಾಗೂ ಜಿಲ್ಲಾಧಿಕಾರಿಗಳನ್ನು ಜಿಲ್ಲಾಧಿಕಾರಿ ಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಗೌಡನಹಳ್ಳಿ ಗ್ರಾಮದ ನಿವಾಸಿಗಳಾದ ನಾಗಮ್ಮ, ಮಂಜುನಾಥ್, ಭವಾನಿ, ಅರುಣ್ಕುಮಾರ್,ಜಗನ್ನಾಥ್,ಶಿವಶಂಕರ್,ಜನಾರ್ಧನ್ ವೀಣಾ, ಮಧುಸೂಧನ್, ಬಾಲಕೃಷ್ಣ ಮತ್ತಿತರರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಜನರು ಕೆಐಎಡಿಬಿ ಭೂ ಸ್ವಾಧೀನದಿಂದ ಗೌಡನಹಳ್ಳಿ ಸರ್ವೆ ನಂ 19/08ನ್ನು ಕೈಬಿಡಬೇಕು ಎಂದು ಮನವಿ ಸಲ್ಲಿಸಿದರು.
ಗೌಡನಹಳ್ಳಿ ಸರ್ವೆ ನಂಬರ್ 19/08ರಲ್ಲಿ ಅನಾದಿ ಕಾಲದಿಂದಲೂ ಗ್ರಾಮಠಾಣೆಗೆ ಸೇರಿದ ಸುಮಾರು 3.33 ಎಕರೆ ಜಮೀನಿನಲ್ಲಿ ಸುಮಾರು ಎಂಟು ಕುಟುಂಬಗಳು ಮನೆ ನಿರ್ಮಿಸಿಕೊಂಡು,ಸರಕಾರದಿದ ವಿದ್ಯುತ್,ಕುಡಿಯುವ ನೀರಿನ ಸಂಪರ್ಕ ಪಡೆದಿದ್ದೇವೆ.ಅಲ್ಲದೆ ತೆಂಗು, ಮಾವು ಇನ್ನಿತರ ಮರಗಳನ್ನು ನೆಟ್ಟು,ಪೋಷಿಸಿಕೊಂಡು ಅದರಲ್ಲಿ ಬರುವ ಅದಾಯದಿಂದ ನಮ್ಮ ಕುಟುಂಬದವರು ಜೀವನ ನಡೆಸುತ್ತಿದ್ದು,ನಮಗಾಗಲಿ,ನಮ್ಮ ಕುಟುಂಬದವರಿಗಾಗಲಿ ಬದುಕುಲು ಬೇರೆ ಭೂಮಿಯಿಲ್ಲ.ಇಂತಹ ಸಂದರ್ಭದಲ್ಲಿ ಕೆ.ಐ.ಎ.ಡಿ.ಬಿ.ಯವರು ಕೈಗಾರಿಕಾ ಉದ್ದೇಶಕ್ಕಾಗಿ ಸದರಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ ಇದರಿoದ ನಾವು ಬೀದಿ ಪಾಲಾಗಲಿದ್ದೇವೆ.ಇದೇ ಭೂಮಿಯನ್ನು ನಂಬಿ 8 ಕುಟುಂಬಗಳ 36 ಕ್ಕೂ ಹೆಚ್ಚು ಜನರು ಜೀವನ ನಡೆಸುತ್ತಿದ್ದೇವೆ.ಹಾಗಾಗಿ ನಮ್ಮ ಕುಟುಂಬಕ್ಕೆ ಆಧಾರವಾಗಿರುವ ಸದರಿ ಜಾಗವನ್ನು ಭೂ ಸ್ವಾಧೀನದಿಂದ ಕೈಬಿಟ್ಟು, ಬಡ ಕುಟುಂಬವೊoದು ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಗೌಡನಹಳ್ಳಿ ಮುಖಂಡರಾದ ಶಿವಶಂಕರಯ್ಯ ಮಾತನಾಡಿ,ನಮ್ಮದು ಕಂದಾಯ ಗ್ರಾಮ. ಸುಮಾರು 08 ಮನೆಗಳಿವೆ. ಕೆಐಎಡಿಬಿಯವರು ಒಂದು ನೊಟೀಷ್ ನೀಡದೆ,ಏಕಾಎಕಿ ಜೆಸಿಬಿ ತೆಗೆದುಕೊಂಡು ಬಂದು ಮನೆಗಳನ್ನು ಒಡೆದು ಹಾಕಲು ಮುಂದಾಗಿದ್ದಾರೆ.ನಮ್ಮದು ಗೌಡನೇಹಳ್ಳಿಗೆ ಹೊಂದಿಕೊoಡಿರುವ ಭೂಮಿ,ಕೆಐಎಡಿಬಿಯ ಭೂಮಿಯೇ ಬೇರೆ ಇದೆ. ಕೆಲವರು ಕಿತಾಪತಿ ಮಾಡಿ ನಮ್ಮ ಭೂಮಿಯನ್ನು ಕಬಳಿಸಲು ನೋಡುತ್ತಿದ್ದಾರೆ.ಜಿಲ್ಲಾಡಳಿತ ಮದ್ಯ ಪ್ರವೇಶಿಸಿ ನಮ್ಮ ಭೂಮಿಯನ್ನು ಉಳಿಸಿಕೊಡಬೇಕು. ಇರುವ ತುಂಡು ಭೂಮಿಗಾಗಿ ಎಂತಹ ತ್ಯಾಗಕ್ಕೂ ನಾವು ಸಿದ್ದರಿದ್ದೇವೆ ಎಂದರು.
ಕೆ.ಐ.ಎ.ಡಿ.ಬಿಗೆ ಭೂಮಿ ಕಳೆದುಕೊಂಡಿರುವ ಗೌಡನಹಳ್ಳಿ ಗ್ರಾಮದ ವೀಣಾ ಮಾತನಾಡಿ,ನಮ್ಮ ತಂದೆ, ಚಿಕ್ಕಪ್ಪಂದಿರು ಕಷ್ಟಪಟ್ಟು ಈ ಭೂಮಿಯನ್ನು ಸಂಪಾದಿಸಿದ್ದಾರೆ. ಇಂದಿಗೂ ಕೂಲಿ ನಾಲಿ ಮಾಡಿಯೇ ಜೀವನ ನಡೆಸುತ್ತಿದ್ದೇವೆ. ಏಕಾಎಕಿ ಸರಕಾರದ ಆದೇಶವಿದೆ ಎಂದು ಹೇಳಿ ಕೆಐಎಡಿಬಿಯವರು ಭೂಮಿ ವಶಕ್ಕೆ ಪಡೆಯಲು ಮುಂದಾಗಿದ್ದಾರೆ.ಭೂಮಿಯಲ್ಲಿ ಗಿಡಗಳನ್ನು ಬೆಳೆಸಲು ನಮ್ಮ ಬೆವರಿನ ಜೊತೆ, ರಕ್ತವನ್ನು ಸುರಿಸಿದ್ದೇವೆ.ಹಾಗಾಗಿ ನಮ್ಮ ಭೂಮಿಯನ್ನು ಜಿಲ್ಲಾಡಳಿತ ನಮಗೆ ನೀಡಬೇಕು ಎಂದು ಒತ್ತಾಯಿಸಿದರು.



