ತುಮಕೂರು: ಸಮಾಜಕ್ಕೆ ಧರ್ಮರಾಯನ ಸತ್ಯ ಮತ್ತು ದುರ್ಯೋಧನನ ಸ್ನೇಹಪರ ವ್ಯಕ್ತಿತ್ವ ಎರಡು ಮುಖ್ಯ. ಇವರೆಡು ಮೇಳೈಸಿದರೆ ಮಾತ್ರ ಸಮಾಜದಲ್ಲಿ ಒಂದು ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ನಾಗಣ್ಣ ಅಭಿಪ್ರಾಯಪಟ್ಟಿದ್ದಾರೆ.


ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ), ತುಮಕೂರು, ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾಂತರಾಜು ಕೌತುಮಾರನಹಳ್ಳಿ ನಿರ್ದೇಶನದ ಸುಯೋಧನ ರಂಗ ಪ್ರಯೋಗಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಎಂತಹ ಸಂದರ್ಭದಲ್ಲಿಯೂ ಸತ್ಯ ಹೇಳುವ ಧರ್ಮರಾಯನ ಜೊತೆಗೆ, ತನ್ನ ಸ್ನೇಹ ಬಯಸಿದವನ ಜಾತಿ, ಧರ್ಮ ನೋಡದೆ ಆತನನ್ನು ಕೊನೆಯ ವರೆಗೆ ಜೊತೆಯಲ್ಲಿಯೇ ಇಟ್ಟುಕೊಂಡು ಬದುಕುವ ಧರ್ಯೋಧನ ಗುಣ ಎರಡನ್ನು ಮನುಷ್ಯರು ಅಳವಡಿಸಿಕೊಂಡರೆ ಮತ್ತೊಂದು ಹೊಸ ಪ್ರಪಂಚವನ್ನು ಕಾಣಬಹುದೆಂದರು.
ಇoದಿನ ಅಧುನಿಕ ಕಾಲದಲ್ಲಿಯೂ ಪುರಾಣದ ಕೃತಿಗಳಾದ ರಾಮಾಯಣ, ಮಹಾಭಾರತ, ಭಗವ್ದಗೀತೆ ಹೊರತು ಪಡಿಸಿ ನಾಟಕದ ಕತೆಗಳು ಅತಿ ವಿರಳ. ಆದರೆ ಇವೆಲ್ಲವುಗಳಿಗೂ ಮೀಗಿಲಾದ ಗ್ರಂಥವೊoದಿದೆ, ಅದೇ ಸಂವಿಧಾನ. ರಾಮಾಯಣ, ಮಹಾಭಾರತದಲ್ಲಿನ ಎಲ್ಲಾ ಒಳ್ಳೆಯ ಅಂಶಗಳನ್ನು ಜನರು ತಮ್ಮಲ್ಲಿ ಅಳವಡಿಸಿಕೊಂಡ ರೀತಿ, ಸಂವಿಧಾನವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಸಂವಿಧಾನ ಪಾಲನೆಯಿಂದ ಜನರಲ್ಲಿ, ನೆಮ್ಮದಿ, ಶಾಂತಿಯನ್ನು ಕಾಣಬಹುದಾಗಿದೆ ಎಂದು ಡಾ.ಕೆ. ನಾಗಣ್ಣ ನುಡಿದರು.
ಕಲಾಶ್ರೀ ಡಾ.ಲಕ್ಷ್ಮಣ್ ದಾಸ್ ಮಾತನಾಡಿ,ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಅನೇಕ ಪ್ರಯೋಗಾತ್ಮಕ ನಾಟಕಗಳನ್ನು ರಂಗದ ಮೇಲೆ ಕಟ್ಟಿಕೊಟ್ಟಿದೆ. ಹವ್ಯಾಸಿ, ಪೌರಾಣಿಕ, ಸಾಮಾಜಿಕ ಎಲ್ಲ ರೀತಿಯ ನಾಟಕಗಳನ್ನು ರಂಗದ ಮೇಲೆ ತಂದಿದ್ದಾರೆ. ಹೊಸ ಕಲಾವಿದರನ್ನು ರಂಗಕ್ಕೆ ಪರಿಚಯಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಇವರಿಂದ ಮತ್ತಷ್ಟು ಒಳ್ಳೆಯ ನಾಟಕಗಳನ್ನು ನಿರೀಕ್ಷೆ ಮಾಡೋಣ ಎಂದು ಶುಭ ಹಾರೈಸಿದರು.



