ತುಮಕೂರು.ಅ.26:ವಿದ್ಯಾರ್ಥಿ ಯುವಜನರಲ್ಲಿರುವ ಸುಪ್ತ ಪ್ರತಿಭೆಗಳನ್ನು, ಅವರಲ್ಲಿನ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ಕಾಲೇಜು ಮ್ಯಾಜೀನ್ ಒಂದು ಸೃಜನಶೀಲ ವೇದಿಕೆ.ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತಾಗಬೇಕು ಎಂದು ಹಂಪಿ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸರಕಾರಿ ಪದವಿ ಕಾಲೇಜಿನ ವಿಶ್ವಮಾನವ ಸಭಾಂಗಣದಲ್ಲಿ ಕಾಲೇಜಿ ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2024ನೇ ಸಾಲಿನ ವಾರ್ಷಿಕ ಸ್ಮರಣ ಸಂಚಿಕೆ ತುಂಬೆ ಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು,ಸ್ಮರಣ ಸಂಚಿಕೆಗಳಿಗೆ ಎನಾದರೊಂದು ಬರೆಯುವ ಮೂಲಕ ನಿಮ್ಮ ಇರುವಿಕೆಯನ್ನು ವ್ಯಕ್ತಪಡಿಸುವಂತೆ ಸಲಹೆ ನೀಡಿದರು.ಗ್ರಾಮೀಣ ಮಕ್ಕಳಲ್ಲಿ ಹಿಂಜರಿಕೆ ಎಂಬುದು ಬಹಳಷ್ಟು ಕೆಲಸ ಮಾಡುತ್ತದೆ. ಆದರೆ ಇಂದು ದೇಶದಲ್ಲಿ ಹೆಸರು ಮಾಡಿರುವ ಸಾಹಿತಿಗಳು, ವಿಜ್ಞಾನಿಗಳ, ಬರಹಗಾರರು ಎಲ್ಲರೂ ಗ್ರಾಮೀಣ ಪರಿಸರದಿಂದ ಬಂದವರೇ ಆಗಿದ್ದಾರೆ.ಹಾಗಾಗಿ ಗ್ರಾಮೀಣ ಮಕ್ಕಳು ಕೀಳಿರಿಮೆಯನ್ನು ಬಿಟ್ಟು, ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಇಂತಹ ವೇದಿಕೆಗಳನ್ನು ಬಳಸಿಕೊಳ್ಳಬೇಕಾಗಿದೆ. ತಮ್ಮ ಸುತ್ತಮುತ್ತ ಕಂಡುಬರುವ ಘಟನೆಗಳು, ತಮ್ಮ ಬದುಕಿನ ವೃತ್ತಾಂತಗಳನ್ನೇ ಕವನ, ಕಥೆ, ಲೇಖನ, ಹಾಸ್ಯ, ವಿಡಂಬನೆಯ ಮೂಲಕ ಅಭಿವ್ಯಕ್ತಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು.ಇದರಿಂದ ನಿಮಗೆ ಭಾಷೆಯ ಮೇಲೆ ಹಿಡಿತ ಸಿಗುವುದಲ್ಲದೆ,ಎಲ್ಲವನ್ನು ಎದುರಿಸುವ ಆತ್ಮವಿಶ್ವಾಸ ಮೂಡುತ್ತದೆ.ಅಲ್ಲದೆ ಸಂವಹನ ಜ್ಞಾನ ವಿಸ್ತಾರಗೊಳ್ಳುತ್ತದೆ ಎಂದು ಕಿವಿ ಮಾತು ಹೇಳಿದರು.ಇಂದಿನ ಸೆಮಿಸ್ಟರ್ ಶಿಕ್ಷಣ ಪದ್ದತಿ ಕೇವಲ ಅಂಕ ಗಳಿಕೆಗಷ್ಟೇ ಸಿಮಿತವಾಗಿದೆ.ಆಟೋಟಗಳಿಗೆ, ಪಠ್ಯೇತರ ಚಟುವಟಿಕೆಗಳಿಗೆ ಅವಕಾಶವೇ ಇಲ್ಲದಂತಾಗಿದೆ.ಇದರ ನಡುವೆಯೂ ಕೆಲವರು ತುಂಬೆ ಸ್ಮರಣ ಸಂಚಿಕೆಗೆ ಕಥೆ, ಕವನ, ಲೇಖನಗಳನ್ನು ಬರೆದಿದ್ದೀರ.ಮುಂದಿನ ವರ್ಷದ ಸಂಚಿಕೆಯಲ್ಲಿ ಇದು ದುಪ್ಪಟ್ಟಾಗಬೇಕು.ತುಂಬೆ ಅತ್ಯಂತ ನಿಕೃಷ್ಟವಾಗಿರುವ ಗಿಡ ಆದರೆ ಅದರ ಹೂವು ಶಿವನಿಗೆ ಶ್ರೇಷ್ಠ. ತುಮಕೂರು ಜಿಲ್ಲೆ ಸಹ ಬಡತನ, ಸಿರಿತನ ಎರಡನ್ನು ಹೊಂದಿದೆ.ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ,ಐತಿಹಾಸಿಕವಾಗಿ ಬಹಳ ಪ್ರಸಿದ್ದಿ ಪಡೆದಿದೆ.ನಿಧಾನವಾಗಿ ವಿದ್ಯಾಕಾಶಿಯಾಗಿ ಪರಿವರ್ತನೆಯಾಗುತ್ತಿದೆ. ಕೈಗಾರಿಕೆಗಳಲ್ಲಿ ದೇಶದ ಎರಡನೇ ಅತಿದೊಡ್ಡ ಕೈಗಾರಿಕಾ ಹಬ್ ಹೊಂದಿದ ನಗರವಾಗಿದೆ.ಇಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಲು ನೀವೆಲ್ಲರೂ ಸಿದ್ದರಾಗಬೇಕು.ನಿರಾಶಾ ಮನೋಭಾವನೆ ಬಿಟ್ಟು, ಆಶಾವಾದಿಗಳಾಗಿ ಸಮಾಜದಲ್ಲಿ ಬದಲಾವಣೆಗೆ ಮುನ್ನುಡಿ ಬರೆಯುವಂತೆ ಡಾ.ಡಿ.ವಿ.ಪರಮಶಿವಮೂರ್ತಿ ಸಲಹೆ ನೀಡಿದರು.ಉರ್ದು ವಿಭಾಗದ ಮುಖ್ಯಸ್ಥರು ಹಾಗೂ ತುಂಬೆ ಸ್ಮರಣ ಸಂಚಿಕೆ ಗೌರವ ಸಂಪಾದಕರಾದ ಶ್ರೀಮತಿ ತರನ್ನುಂ ನಿಖತ್ ಎಸ್. ಮಾತನಾಡಿ,ಆನ್ಲೈನ್ನಲ್ಲಿ ಇದ್ದ ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ಅಫ್ ಲೈನ್ಗೆ ತರಬೇಕೆಂದು ಪ್ರಯತ್ನಿಸಿದ ಫಲವಾಗಿ ಇಂದು ತುಂಬೆ ಸಂಚಿಕೆ ನಿಮಗಳ ಕೈ ಸೇರಿದೆ.ಇದು ವಿದ್ಯಾರ್ಥಿಗಳಿಗೊಸ್ಕರವೇ ಇರುವ ವೇದಿಕೆಯಾಗಿದೆ.ಮೊಬೈಲ್ ನಿಮ್ಮಲ್ಲಿರುವ ಪ್ರತಿಭೆಯನ್ನು ಕುಗ್ಗಿಸುತ್ತಿದ್ದು, ಅದನ್ನು ಬದಿಗಿಟ್ಟು, ನಿಮ್ಮಲ್ಲಿರುವ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುವಂತೆ ಸಲಹೆ ನೀಡಿದರು.



