ತುಮಕೂರು : ನಗರದ ಬಿ.ಹೆಚ್.ರಸ್ತೆಯಲ್ಲಿರುವ ಗಾಯಿತ್ರಿ ಚಿತ್ರಮಂದಿರದ ಹತ್ತಿರ ಖ್ಯಾತ ಚಲನಚಿತ್ರ ನಟ ರಾಕಿಂಗ್ ಸ್ಟಾರ್ ಯಶ್ರವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಯಶ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನ್ನ ಸಂತಪರ್ಣೆಯನ್ನು ಏರ್ಪಡಿಸಲಾಗಿತ್ತು.
ಚಿತ್ರನಟ ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಬೃಹದ್ ಕಟ್ಔಟ್ ಹಾಕಲು ಹೋಗಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿಯನ್ನು ಸಹ ಕೋರಿದರು, ಜೊತೆಗೆ ನೆನ್ನೆ ಗದಗ್ನಲ್ಲಿ ಯಶ್ ಅವರ ಬೆಂಗಾವಲು ಕಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ವ್ಯಕ್ತಿಯ ಆತ್ಮಕ್ಕೂ ಸಹ ಶಾಂತಿ ಕೋರಿದ ತುಮಕೂರಿನ ಯಶ್ ಅಭಿಮಾನಿಗಳು.
ಅಖಿಲ ಕರ್ನಾಟಕ ಯಶ್ ಅಭಿಮಾನಿ ಬಳಗದ ತುಮಕೂರು ಜಿಲ್ಲಾಧ್ಯಕ್ಷರಾದ ಕೆ.ಜಿ.ಎಫ್. ಮಂಜು ಮಾತನಾಡಿ ಯಶ್ ಅವರು ಈಗಾಗಲೇ ತಮ್ಮ ಹುಟ್ಟುಹಬ್ಬವನ್ನು ಯಾರೂ ಸಹ ಅದ್ಧೂರಿಯಾಗಿ ಆಚರಣೆ ಮಾಡದೇ ಇರುವಂತೆ ಕೋರಿದ್ದರು, ಆದರೂ ಸಹ ಅವರ ಅಭಿಮಾನದಿಂದ ಅವರ ಅಭಿಮಾನಿಗಳು ಯಶ್ ಅವರ ಬೃಹದಾಕಾರದ ಕಟ್ಔಟ್ ಕಟ್ಟಲು ಹೋಗಿ ದುರಂತ ಸಂಭವಿಸಿದ್ದು ಇದಕ್ಕೆ ತಾವು ವಿಷಾದವನ್ನು ವ್ಯಕ್ತಪಡಿಸುತ್ತಿದ್ದೇವೆಂದು ತಿಳಿಸಿದರು.
ಈ ಎಲ್ಲಾ ದುರಂತಗಳು ಸಂಭವಿಸಿರುವ ಪರಿಣಾಮ ಯಶ್ ಅವರ ಮನಸ್ಸಿಗೂ ಸಹ ತೀವ್ರ ನೋವು ಉಂಟಾಗಿದೆಯಲ್ಲದೇ ನಮಗೂ ಸಹ ಆಘಾತವಾಗಿದ್ದು, ಈ ರೀತಿಯಾದ ನೋವುಗಳಿಂದ ಹೊರ ಬರಲು ನಮಗೂ ತುಂಬಾ ಕಷ್ಟಕರವಾಗಿದೆಂದು ತಿಳಿಸಿದರು. ಜೊತೆಗೆ ತುಮಕೂರಿನ ಅಭಿಮಾನಿಗಳಾದ ನಾವುಗಳು ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ನೆರವೇರಿಸುವುದರೊಂದಿಗೆ ಯಶ್ ಅವರ ಹುಟ್ಟುಹಬ್ಬವನ್ನು ಸರಳ ರೀತಿಯಲ್ಲಿ ನಡೆಸುತ್ತಿದ್ದೇವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಯಶ್ ಅಭಿಮಾನಿ ಬಳಗದ ತುಮಕೂರು ಜಿಲ್ಲಾಧ್ಯಕ್ಷ ಕೆ.ಜಿ.ಎಫ್ ಮಂಜು, ಅಜಯ್, ಸುರೇಶ್, ಮನೋಜ್, ಮಂಜು, ಸಿದ್ದೇಶ್, ಮಾರುತಿ ಸೇರಿದಂತೆ ಇನ್ನು ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.



