
ಬೇಸಿಗೆ ಶಿಬಿರ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಸಹಕಾರಿ
ತುಮಕೂರು(ಕ.ವಾ.)ಏ.೧೭: ಪ್ರತಿಯೊಂದು ಮಗುವಿನಲ್ಲಿಯೂ ಒಂದಲ್ಲಾ ಒಂದು ಪ್ರತಿಭೆ ಅಡಗಿರುತ್ತದೆ. ಇಂತಹ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಬೇಸಿಗೆ ಶಿಬಿರ ಸಹಕಾರಿಯಾಗಲಿದೆ ಎಂದು ಜಿಲ್ಲಾ ಬಾಲಭವನ ಸದಸ್ಯ ಬಸವಯ್ಯ ತಿಳಿಸಿದರು.
ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿಂದು ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ೧೦ ದಿನಗಳ ಕಾಲ ಹಮ್ಮಿಕೊಂಡಿರುವ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಈ ಶಿಬಿರದಲ್ಲಿ ಯೋಗ, ಕರಾಟೆ, ಚಿತ್ರಕಲೆ, ಕರಕುಶಲತೆ, ನೃತ್ಯ, ರಂಗಚಟುವಟಿಕೆ ಕುರಿತು ತರಬೇತಿ ನೀಡಲಾಗುವುದು. ಪೋಷಕರು ತಮ್ಮ ಮಕ್ಕಳನ್ನು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಅನುವು ಮಾಡಿಕೊಡಬೇಕೆಂದು ತಿಳಿಸಿದರು.
ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಶಿಧರ್ ಮಾತನಾಡಿ, ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಈ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದರಲ್ಲದೆ, ಪರಿಸರದ ಬಗ್ಗೆ ಕಾಳಜಿಯನ್ನು ಬೆಳೆಸಿಕೊಳ್ಳಬೇಕೆಂದರು. ಈ ನಿಟ್ಟಿನಲ್ಲಿ ಮಕ್ಕಳು ತಮ್ಮ ಮನೆಯ ಮುಂದೆ ಗಿಡಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕೆAದು ಕಿವಿ ಮಾತು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ ಮಾತನಾಡಿ, ಬೇಸಿಗೆ ಶಿಬಿರವು ಏಪ್ರಿಲ್ ೨೪ರವರೆಗೆ ನಡೆಯಲಿದ್ದು, ಶಿಬಿರದಲ್ಲಿ ಮಕ್ಕಳಿಗೆ ಆಸಕ್ತಿ ತರುವಂತಹ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದಲ್ಲದೆ, ನೈತಿಕ ಶಿಕ್ಷಣದ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ತ್ರಿವೇಣಿ(ಯೋಗ), ಪ್ರಕಾಶ್(ಕರಾಟೆ), ರಂಗಸ್ವಾಮಿ(ಚಿತ್ರಕಲೆ), ಪವಿತ್ರ(ಕರಕುಶಲತೆ), ಚೇತನ್(ನೃತ್ಯ), ಕಾಂತರಾಜು(ರAಗಚಟುವಟಿಕೆ) ಅವರು ಮಕ್ಕಳಿಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಶಾಲಾ ಮಕ್ಕಳು ಸೇರಿದಂತೆ ವಿವಿಧ ಶಾಲೆಯ ಮಕ್ಕಳು, ಪೋಷಕರು, ಕಾರ್ಯಕ್ರಮ ಸಂಯೋಜಕಿ ಮಮತ ಪಿ. ಸೇರಿದಂತೆ ಮತ್ತಿತರರು ಹಾಜರಿದ್ದರು.



