ತುಮಕೂರು ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಜೈನ್ ಪಬ್ಲಿಕ್ ಶಾಲೆಯ ಆವರಣದಲ್ಲಿ 75ನೇ ಗಣರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲಾಯಿತು. ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಲೆಯ ಮಕ್ಕಳ ಜೊತೆಗೆ ಪೋಷಕರೊಟ್ಟಿಗೆ ಆಚರಿಸಿದ್ದು ಬಹು ವಿಶೇಷವಾಗಿತ್ತು.
ಗಣರಾಜ್ಯೋತ್ಸವದ ಪ್ರಯುಕ್ತ ಶಾಲೆಯ ಆವರಣದಲ್ಲಿ ಮಕ್ಕಳಿಗೆ ಮಿನಿ ಮ್ಯಾರಥಾನ್ನ್ನು ಆಯೋಜಿಸಿ ಪೋಷಕರು ಮತ್ತು ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿದರು, ಮ್ಯಾರಥಾನ್ ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುನಿತ ದುಗ್ಗಲ್ರವರು ಧ್ವಜಾರೋಹಣ ನೆರವೇರಿಸಿದರು, ಈ ಸಂದರ್ಭದಲ್ಲಿ ಮಕ್ಕಳು ಬಹಳ ಶಿಸ್ತಿನಿಂದ ಪಥಸಂಚಲನ ನಡೆಸಿಕೊಟ್ಟರು. ನಂತರ ಶಾಲೆಯ ವಿದ್ಯಾರ್ಥಿಯಿಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವವರಿಗೆ ಸ್ವಾಗತವನ್ನು ಕೋರಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಾಂಶುಪಾಲರು ಗಣರಾಜ್ಯೋತ್ಸವದ ಮಹತ್ವ, ನಮ್ಮ ಭಾರತ ದೇಶವು ಸ್ವಾತಂತ್ರö್ಯದ ನಂತರ ಗಣತಂತ್ರವಾಗಿ ಪರಿವರ್ತನೆ ಆದ ಬಗ್ಗೆ ಹಾಗೂ ನಮ್ಮ ದೇಶಕ್ಕೆ ಸಂವಿಧಾನವನ್ನು ಅರ್ಪಣೆ ಮಾಡಿದ ಡಾ. ಬಿ.ಆರ್.ಅಂಬೇಡ್ಕರ್ ಬಗ್ಗೆ ಹಾಗೂ ಗಣರಾಜ್ಯೋತ್ಸವವನ್ನು ಆಚರಿಸುವ ಹಾಗೂ ನಮ್ಮ ಭಾರತದ ಶಕ್ತಿ ಪ್ರದರ್ಶನ ದೆಹಲಿಯಲ್ಲಿ ಹಾಗೆಯೇ ವಾಘಾ ಗಡಿಯಲ್ಲಿ (ಭಾರತ ಮತ್ತು ಪಾಕ್ ಗಡಿ)ಯಲ್ಲಿ ನಮ್ಮ ಸಿಫಾಯಿಗಳು ಯಾವ ರೀತಿ ಕವಾಯತು ಮಾಡಿ ಪ್ರದರ್ಶನ ತೋರುತ್ತಾರೆ ಎಂಬುದರ ಬಗ್ಗೆ ಮಕ್ಕಳಿಗೆ ಭಾಷಣವನ್ನು ಮಾಡಿದರು.