ಎಸ್ಸೆಸ್ಸೆಲ್ಸಿ: ತುಮಕೂರಿಗೆ ಶೇ. 75.16, ಮಧುಗಿರಿಗೆ ಶೇ. 62.44 ಫಲಿತಾಂಶ
ತುಮಕೂರು 16ನೇ ಸ್ಥಾನಕ್ಕೆ ಜಿಗಿತ, ಮಧುಗಿರಿ 30ನೇ ಸ್ಥಾನಕ್ಕೆ ಕುಸಿತ
ತುಮಕೂರು- ಮಾರ್ಚ್ 25 ರಿಂದ ಏಪ್ರಿಲ್ 26ರ ವರೆಗೆ ರಾಜ್ಯದಲ್ಲಿ ನಡೆದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಲ್ಪತರುನಾಡು ತುಮಕೂರು ಶೈಕ್ಷಣಿಕ ಜಿಲ್ಲೆ ಶೇ. 75.16 ರಷ್ಟು ಫಲಿತಾಂಶ ಪಡೆಯುವ ಮೂಲಕ 16ನೇ ಸ್ಥಾನಕ್ಕೆ ಜಿಗಿದಿದೆ.
ಕಲ್ಪತರುನಾಡು ತುಮಕೂರು ಜಿಲ್ಲೆ ತುಮಕೂರು ಹಾಗೂ ಮಧುಗಿರಿ ಎರಡು ಶೈಕ್ಷಣಿಕ ಜಿಲ್ಲೆಗಳನ್ನು ಒಳಗೊಂಡಿದ್ದು, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತುಮಕೂರು ಶೈಕ್ಷಣಿಕ ಜಿಲ್ಲೆ 16ನೇ ಸ್ಥಾನಕ್ಕೆ ಜಿಗಿದಿದ್ದರೆ, ಮಧುಗಿರಿ ಶೈಕ್ಷಣಿಕ ಜಿಲ್ಲೆ ಶೇ. 62.44 ರಷ್ಟು ಫಲಿತಾಂಶ ಗಳಿಸುವ ಮುಖೇನ 30ನೇ ಸ್ಥಾನಕ್ಕೆ ಕುಸಿದಿದೆ.
ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 22,198 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 5,515 ಮಂದಿ ಅನುತ್ತೀರ್ಣರಾಗಿದ್ದು, 16,683 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ತುಮಕೂರು ಶೈಕ್ಷಣಿಕ ಜಿಲ್ಲೆಗೆ ಶೇ. 75.16 ರಷ್ಟು ಫಲಿತಾಂಶ ಲಭಿಸಿದೆ.
ಕಳೆದ ಬಾರಿ ತುಮಕೂರು ಶೈಕ್ಷಣಿಕ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 20ನೇ ಸ್ಥಾನದಲ್ಲಿತ್ತು. ಈ ಬಾರಿ 16ನೇ ಸ್ಥಾನಕ್ಕೆ ಜಿಗಿಯುವ ಮೂಲಕ ಫಲಿತಾಂಶದಲ್ಲಿ ತುಸು ಪ್ರಗತಿ ಕಂಡಿದೆ.
ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಾರ್ಚ್ 25 ರಿಂದ ಏಪ್ರಿಲ್ 26 ರವರೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 12,715 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 4776 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಉಳಿದ 7939 ಮಕ್ಕಳು ತೇರ್ಗಡೆಯಾಗುವ ಮೂಲಕ ಶೇ. 62.44 ರಷ್ಟು ಫಲಿತಾಂಶ ದೊರೆತಿದೆ.
ಕಳೆದ ಬಾರಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಪ್ರಗತಿ ಸಾಧಿಸಿ 9ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ 30ನೇ ಸ್ಥಾನಕ್ಕೆ ಕುಸಿದಿದ್ದು, ಫಲಿತಾಂಶದಲ್ಲಿ ಹಿನ್ನಡೆ ಸಾಧಿಸಿದೆ.
4 ಶಾಲೆಗಳಲ್ಲಿ ಶೂನ್ಯ ಫಲಿತಾಂಶ
ತುಮಕೂರು ಶೈಕ್ಷಣಿಕ ಜಿಲ್ಲೆಯ 2 ಶಾಲೆ ಹಾಗೂ ಮಧುಗಿರಿ ಶೈಕ್ಷಣಿಕ ಶಾಲೆಯ 2 ಸೇರಿ ಒಟ್ಟು 4 ಶಾಲೆಗಳಲ್ಲಿ ಈ ಬಾರಿ ಶೂನ್ಯ ಫಲಿತಾಂಶ ಬಂದಿದೆ.
ತುಮಕೂರು ಶೈಕ್ಷಣಿಗ ಜಿಲ್ಲೆ ವ್ಯಾಪ್ತಿಯ ತುಮಕೂರು ನಗರದ ಇಂಡಿಯನ್ ರೆಡ್ಕ್ರಾಸ್ ಶಾಲೆ, ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗದ ಕೆಂಪೇಗೌಡ ಪ್ರೌಢಶಾಲೆ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಒಳಪಡುವ ಕೊರಟಗೆರೆಯ ವಿವೇಕಾನಂದ ಪ್ರೌಢಶಾಲೆ, ಪಾವಗಡ ತಾಲ್ಲೂಕಿನ ಕಿಲಾರದಹಳ್ಳಿಯ ರಾಷ್ಟçಪ್ರಗತಿ ಶಾಲೆಯಲ್ಲಿ ಯಾವುದೇ ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಶೂನ್ಯ ಫಲಿತಾಂಶ ದಾಖಲಾಗಿದೆ.
ಹರ್ಷತಾ 2ನೇ ಸ್ಥಾನ
ಜಿಲ್ಲೆಯ ಸಿರಾ ನಗರದ ವಾಸವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಡಿ.ಎಂ. ಹರ್ಷಿತಾ ಅವರು 625 ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸಿರಾ ಕೋಟೆ ನಗರದ ನಿವಾಸಿಗಳಾದ ಮಂಜುನಾಥ್ ಮತ್ತು ಮಂಜುಳಾ ದಂಪತಿಯ ಪುತ್ರಿ ಡಿ.ಎಂ. ಹರ್ಷಿತಾ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ರಾಜ್ಯಕ್ಕೆ 2ನೇ ಸ್ಥಾನ ಪಡೆಯುವ ಮೂಲಕ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಂಪೂರ್ಣ ಮಾಹಿತಿ
Leave a comment
Leave a comment