ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತುಮಕೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ ೧೦ನೇ ಸ್ಥಾನ,
ತುಮಕೂರು- ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತುಮಕೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ ೧೦ನೇ ಸ್ಥಾನಕ್ಕೇರಿಸಲು ಉಪನ್ಯಾಸಕರುಗಳು ಮತ್ತಷ್ಟು ಉತ್ತಮವಾಗಿ ಬೋಧನೆ ಮಾಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಾಧರ್ ಸಲಹೆ ನೀಡಿದರು.
ನಗರದ ಬಿ.ಹೆಚ್. ರಸ್ತೆಯ ಜಯದೇವ ಹಾಸ್ಟೆಲ್ ಆವರಣದಲ್ಲಿರುವ ಅನನ್ಯ ಇನ್ಸಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪ.ಪೂ. ಶಿಕ್ಷಣ ಇಲಾಖೆ) ಹಾಗೂ ಇತಿಹಾಸ ವೇದಿಕೆ, ಜಿಲ್ಲಾ ಪ.ಪೂ. ಕಾಲೇಜುಗಳ ಇತಿಹಾಸ ಉಪನ್ಯಾಸಕರ ಬಳಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಇತಿಹಾಸ ಉಪನ್ಯಾಸಕರಿಗೆ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದ್ವಿತೀಯ ಪಿಯುಸಿ ಫಲಿತಾಂಶವನ್ನು ಮತ್ತಷ್ಟು ಉತ್ತಮಗೊಳಿಸಿ ರಾಜ್ಯದಲ್ಲಿ ತುಮಕೂರು ಜಿಲ್ಲೆಯನ್ನು ೧೦ಸ್ಥಾನಕ್ಕೇರಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಉಪನ್ಯಾಸಕರು ಮಕ್ಕಳಿಗೆ ಅತ್ಯುತ್ತವಾಗಿ ವ್ಯಾಸಂಗ ಮಾಡಲು ಸಹಕರಿಸಬೇಕು ಎಂದು ಹೇಳಿದರು.
ಇತಿಹಾಸ ಪ್ರಾಧ್ಯಾಪಕರಿಂದ ಚರ್ಚೆ ನಡೆಸಿರುವುದು ಹೆಮ್ಮೆಯ ವಿಷಯ. ಇತಿಹಾಸ ವಿಷಯದ ಬಗ್ಗೆ ಮಕ್ಕಳಿಗೆ ಮತ್ತಷ್ಟು ವಿಚಾರಗಳನ್ನು ತಿಳಿಸುವ ಸಲುವಾಗಿ ಇಂತಹ ಕಾರ್ಯಾಗಾರಗಳು ಉತ್ತಮ ವೇದಿಕೆಯಾಗಿವೆ ಎಂದರು.
ಪ.ಪೂ. ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರರೆಡ್ಡಿ ಮಾತನಾಡಿ, ೨೦೨೩-೨೪ನೇ ಸಾಲಿನಲ್ಲಿ ಇತಿಹಾಸ ವಿಷಯದಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಎಲ್ಲ ಉಪನ್ಯಾಸಕರು ಆಸಕ್ತಿ ವಹಿಸಿ ಪಾಠ ಬೋಧಿಸಬೇಕು. ಈ ನಿಟ್ಟಿನಲ್ಲ ಇತಿಹಾಸ ಉಪನ್ಯಾಸಕರುಗಳು ಕಾರ್ಯೋನ್ಮುಖರಾಗುವ ಅಗತ್ಯವಿದೆ ಎಂದರು.
ಕಾಲೇಜುಗಳಲ್ಲಿ ಮಕ್ಕಳು ಪರೀಕ್ಷೆಗೆ ಕೂರಲು ಶೇ. ೭೫ ರಷ್ಟು ಹಾಜರಾತಿ ಇರಬೇಕು. ಈ ಬಗ್ಗೆಯೂ ಉಪನ್ಯಾಸಕರುಗಳು ಗಮನ ಹರಿಸುವ ಅಗತ್ಯವಿದೆ ಎಂದರು.